ಮಂಗಳೂರು: ವ್ಯಕ್ತಿಯ ಜೀವನಕ್ಕೊಂದು ಸರಿಯಾದ ಸಂಸ್ಕಾರವು ನೃತ್ಯಕಲೆಯಿಂದ ದೊರಕುತ್ತದೆ. ಹಾಗೆ ನೋಡಿದರೆ ಒಂದೊಂದು ಕಲೆಯು ಆತನ ಸಂಸ್ಕಾರದಿಂದಲೇ ಪ್ರಾಪ್ತವಾಗುವುದು ಸಾಧ್ಯ ಎಂದು ಹಿರಿಯ ಯಕ್ಷಗಾನ ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್ ಹೇಳಿದರು.
ಅವರು ಭಾನುವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ನಡೆದ ಸನಾತನ ಗುರುಪರಂಪರೆ ಕಾರ್ಯಕ್ರಮದಲ್ಲಿ ಗುರುನಮನ ಸ್ವೀಕರಿಸಿ ಮಾತನಾಡಿದರು.
ಲಲಿತ ವಿದ್ಯೆಯನ್ನು ಸ್ವೀಕರಿಸಲು ಪೂರ್ವ ಸಂಸ್ಕಾರ ಬೇಕು. ಸತ್ಯದ ಸಾಕ್ಷಾತ್ಕಾರವೇ ವಿದ್ಯೆಯ ಪರಮ ಲಕ್ಷ್ಯ. ಕೇಳುಗನಿಗೆ ನೋಡುಗನಿಗೆ ಏನನ್ನು ಕೊಡಬೇಕು ಎಂಬುದನ್ನು ಕಲಾವಿದನು ತಿಳಿದಿರಬೇಕು. ಅದು ಗುರುಮುಖೇನ ಲಭ್ಯವಾಗಬೇಕು.
ರಸಪ್ರತಿಪಾದನೆ, ಭಾವಾಭಿವ್ಯಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಸಾಧನೆಯನ್ನು ಮಾಡಿದಾಗ ಪರಂಪರೆಯನ್ನು ಮುಂದುವರೆಸುವುದು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಮೈಸೂರು ಮೂಗೂರು ಶೈಲಿಯ ಭರತನಾಟ್ಯ ಗುರು ಕೀರ್ತಿಶೇಷ ಕೊಡವೂರು ಮಾಧವ ಭಾಗವತ ಅವರ ಸಂಸ್ಮರಣೆಯನ್ನು ನೃತ್ಯಶಿಕ್ಷಕ ರಾಮಕೃಷ್ಣ ಕೊಡಂಚ ಅವರು ನಡೆಸಿಕೊಟ್ಟರು. ಪುತ್ತೂರು ನಾಟ್ಯರಂಗ ಸಂಸ್ಥೆಯ ನೃತ್ಯಗುರು ಮಂಜುಳಾ ಸುಬ್ರಹ್ಮಣ್ಯ ಅವರಿಗೆ ನೃತ್ಯಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜೀವಿತದಲ್ಲಿ ನಮಗಿರುವ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ಹಿರಿಯರ ಉತ್ತಮ ಪರಂಪರೆಯನ್ನು ಹೊಸತಲೆಮಾರಿಗೆ ದಾಟಿಸುವಂತಹುದು. ನಮ್ಮ ಅಪೂರ್ವ ಪರಂಪರೆಯನ್ನು, ವೇದ ಗೀತೆಗಳನ್ನು ಕೊಟ್ಟ ವೇದವ್ಯಾಸರ ಹುಟ್ಟಿದ ದಿನವನ್ನು ನಾವು ಗುರುಪೂರ್ಣಿಮೆ ಎಂದು ಆಚರಿಸುತ್ತೇವೆ. ಆದರೆ ಪ್ರತ್ಯಕ್ಷ ಪೂಜೆಗಿಂತಲೂ ಗುರುವಿನ ತತ್ವ ಬೋಧನೆಯನ್ನು ಜೀವನದಲ್ಲಿ ಅಳವಡಿಸಿದರೆ ಅದು ಅತ್ಯುತ್ತಮ ಗುರುಪೂಜೆ ಎಂದು ಹೇಳಿದರು.
ಯಕ್ಷಗಾನ ರಂಗ ನಿರ್ದೇಶಕ ದಿನಕರ ಪಚ್ಚನಾಡಿ, ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ನೃತ್ಯಗುರುಗಳಾದ ವಿದುಷಿ ಶಾರದಾಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ನಿರ್ದೇಶನದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.
Watch full Program
Photo Gallery
Media Reports