‘ಪೋಷಕರನ್ನು ಗೌರವಿಸುವುದೇ ಮಕ್ಕಳು ಕೊಡಬಹುದಾದ ಕೊಡುಗೆ’
ಮಂಗಳೂರು: ಮಕ್ಕಳಿಗೆ ರೂಪ, ವಿದ್ಯೆ, ಆಶ್ರಯ ಮತ್ತು ಸಂಸ್ಕಾರವನ್ನು ಕೊಟ್ಟು ಬೆಳೆಸುವ ತಂದೆ ತಾಯಿಗೆ ಪ್ರತಿಯಾಗಿ ಮಕ್ಕಳು ಸಂಸ್ಕಾರ ಪಥದ ಜೀವನ ನಡೆಸಿದರೆ ಅದುವೇ ಅವರು ಅಪ್ಪ ಅಮ್ಮನಿಗೆ ಕೊಡುವ ಗೌರವವಾಗಿದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. ಅವರು ಗುರುವಾರ ನಗರ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ಕಲಾಸಾಧಕ ಸ್ವರುಣ್‌ರಾಜ್ ಸಂಸ್ಮರಣೆಯ 10ನೇ ವರ್ಷದ ಕಾರ್ಯಕ್ರಮದಲ್ಲಿ ರಾಷ್ಟ್ರ ಧರ್ಮ ಮತ್ತು ಧರ್ಮಜಾಗೃತಿ ಸಂದೇಶ ನೀಡಿದರು.
ಮಕ್ಕಳಿಗೆ ಸಂಸ್ಕಾರ ಪಥದ ಅರಿವು ಮೂಡಬೇಕಾದರೆ ಶಿಕ್ಷಕರು ಉತ್ಸಾಹದಿಂದ ಕೆಲಸ ಮಾಡಬೇಕು.ಅದಕ್ಕೆ ಪೂರಕವಾಗಿ ಶಿಕ್ಷಣ ಕ್ಷೇತ್ರವು ನಮ್ಮ ಪರಂಪರೆಯನ್ನು ತಿಳಿಸಿಕೊಡಲು ಬದ್ಧವಾಗಿರಬೇಕು. ಸಾವಿರಾರು ವರ್ಷಗಳಿಂದ ಜಗತ್ತಿನ ಅನೇಕ ಸಮುದಾಯಗಳು ಗೌರವಿಸುತ್ತ ಬಂದ ನಮ್ಮ ಸಂಸ್ಕೃತಿಯ ಮಹತ್ವ ನಮ್ಮ ಮಕ್ಕಳಿಗೆ ತಿಳಿಯಬೇಕು. ಭಾರತೀಯ ಸಂಸ್ಕೃತಿಯ ಅರಿವು ಇದ್ದ ವ್ಯಕ್ತಿಯು ತನ್ನ ಜೀವನವನ್ನು ರಾಷ್ಟ್ರ ಕ್ಕಾಗಿ ಸಮರ್ಪಿಸುತ್ತಾರೆ. ಯಾವುದೇ ಸೋಲುಗಳಿಗೆ ಎದೆಗುಂದುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಡಾ. ಎಂ. ಮೋಹನ ಅಳ್ವ ಅವರು, ಸ್ವರುಣ್ ಅವರ ಜೀವನೋತ್ಸಾಹವು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅವರೊಡನೆ ಕೆಲಸಮಾಡಿದ ದಿನಗಳಲ್ಲಿ ಅವರ ಮನದಲ್ಲಿದ್ದ ರಾಷ್ಟ್ರ ಪ್ರೇಮದ, ಆದರ್ಶದ ಆಶಯವನ್ನು ಗಮನಿಸಿದ್ದೇನೆ ಎಂದು ಹೇಳಿದರು.
ವಿಧಾನ ಪರಿಷತ್‌ನ ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವರುಣ್ ನುಡಿನಮನ ಸಲ್ಲಿಸಿದರು. ಸ್ವರುಣ್ ರಾಜ್ ಪ್ರತಿಷ್ಟಾನದ ಅಧ್ಯಕ್ಷರಾದ ಸುರೇಶ್ ರಾಜ್ , ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ, ನೃತ್ಯಗುರುಗಳಾದ ವಿದುಷಿ ಶಾರದಾಮಣಿಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಉಪಸ್ಥಿತರಿದ್ದರು. ದೆಹಲಿಯ ರಮಾವೈದ್ಯನಾಥನ್ ಅವರ ಶಿಷ್ಯೆ ಶುಭಾಮಣಿ ಚಂದ್ರಶೇಖರ್ ಅವರು ಭರತನಾಟ್ಯ ಪ್ರಸ್ತುತ ಪಡಿಸಿದರು.
Media Reports
Watch Program Video