ʼತಾಯಿ ಭಾರತಿ ವಿಶ್ವಭಾರತಿಯಾಗಬೇಕುʼ
ಮಂಗಳೂರು: ಭಾರತವು ವಿಶ್ವಗುರುವಾಗಬೇಕು ಎಂಬುದು ಎಲ್ಲರ ಕನಸು ನಿಜ. ಆದರೆ ತಾಯಿ ಭಾರತಿಯು ಇಡೀ ವಿಶ್ವದ ತಾಯಿಯಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ತಮ್ಮ ಶ್ರೀಮಂತ ಪರಂಪರೆಯನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಬಾಲ ವಾಗ್ಮಿ , ಬೆಂಗಳೂರಿನ ಹಾರಿಕಾ ಮಂಜುನಾಥ್ ಹೇಳಿದರು.
ಅವರು ಭಾನುವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸನಾತನ ನಾಟ್ಯಾಲಯದ 40ನೇ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ –ರಾಷ್ಟ್ರಧರ್ಮ ಜಾಗೃತಿ ಸಂದೇಶʼ ನೀಡಿದರು.
ಸ್ವಾಮಿ ವಿವೇಕಾನಂದರಂತಹ ಜಿಜ್ಞಾಸುಗಳು ಭಾರತದ ಗರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಹೇಳುವುದಷ್ಟೇ ಅಲ್ಲ. ಅವರ ಸಾಧನೆಯ ಹಾದಿಯನ್ನು ಇಂದಿನ ಯುವಜನರು ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ದೇಶವು ಇತರ ದೇಶಗಳನ್ನು ಮಾತೃವಾತ್ಸಲ್ಯದಿಂದ ಪರಿಗಣಿಸುತ್ತಿರುವುದಕ್ಕೆ ಅನೇಕ ಉದಾಹರಣೆಗಳು ಇಂದಿಗೂ ನಮ್ಮ ಮುಂದಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮೂಡುಶೆಡ್ಡೆಯ ಶ್ರೀದೇವಿ ಭಜನಾಮಂದಿರ ಸದಸ್ಯರಿಂದ ಕುಣಿತ ಭಜನೆಯ ನೆರವೇರಿತು. ಸನಾತನ ನಾಟ್ಯಾಲಯದ ನೃತ್ಯ ಗುರು ವಿದುಷಿ ಶಾರದಾ ಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಅವರ ಶಿಷ್ಯವೃಂದದಿಂದ
ಭರತನಾಟ್ಯ ಪ್ರದರ್ಶನ ನೆರವೇರಿತು.
ಈ ಸಂದರ್ಭದಲ್ಲಿ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ, ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ಆರೆಸ್ಸೆಸ್ಸ್ ನಗರ ಸಂಘಚಾಲಕ ಡಾ. ಸತೀಶ್ ರಾವ್, ವಿದ್ವಾಂಸರಾದ ಡಾ. ಪ್ರಭಾಕರ ಜೋಷಿ ಮತ್ತಿತರರು ಉಪಸ್ಥಿತರಿದ್ದರು.