Chandrashekhar Shetty, Director of Sanathana Natyalaya conferred with Tulunada Sushaasana Amritha Bharathi Award at this program.
ಮಂಗಳೂರು: ‘ಹಲವು ವರ್ಷಗಳಿಂದ ಕಾಶ್ಮೀರವು ರಕ್ತದಿಂದ ರಂಜಿತವಾಗಿತ್ತು. ಈಗ ಅದು ಕುಂಕುಮದಂತೆ ಶೋಭಿ ಸುತ್ತಿದೆ. ಕಾಶ್ಮೀರ ಎಂದಿಗೂ ದೇಶದ ಸಿಂಧೂರ’ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸುಶಾಸನ ಸಮಿತಿ ವತಿಯಿಂದ ಏರ್ಪಡಿಸಿದ್ದ ‘ಕಾಶ್ಮೀರ ವಿಜಯ’ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ‘ದೇಶ ಭಕ್ತಿ ಯಾವತ್ತೂ ಜಾಗೃತವಾಗಿರಬೇಕು. ದೇಶಭಕ್ತಿ ಮೂಡಿಸಲು ಯಕ್ಷಗಾನ, ತಾಳಮದ್ದಳೆ ಪ್ರಭಾವಿ ಮಾಧ್ಯಮ ಆಗಿದೆ’ ಎಂದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ‘ಕಾಶ್ಮೀರದ ಐತಿಹಾಸಿಕ, ಧಾರ್ಮಿಕ ಹಿನ್ನೆಲೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಕಾಶ್ಮೀರದ ಕಥೆಯನ್ನು ತಾಳಮದ್ದಳೆ ಮೂಲಕ ಪ್ರಸ್ತುತಪಡಿಸುವ ಅಗತ್ಯವಿತ್ತು’ ಎಂದರು. ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಭೂಸೇನೆಯ ನಿವೃತ್ತ ಅಧಿಕಾರಿ ಬ್ರಿಗೇಡಿಯರ್ ಐ.ಎನ್.ರೈ, ಯಕ್ಷಗಾನ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗ ಅತಿಥಿಗಳಾಗಿದ್ದರು. ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಸುಧಾಕರ ರಾವ್ ಪೇಜಾವರ ಸನ್ಮಾನ ಪತ್ರ ವಾಚಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
ಪ್ರೊ. ಪವನ್ ಕಿರಣಕೆರೆ ಪರಿಕಲ್ಪನೆ-ಸಾಹಿತ್ಯದಲ್ಲಿ ಸುಧಾಕರ ಆಚಾರ್ಯ ಉಡುಪಿ ಅವರ ಸಂಯೋಜನೆಯಲ್ಲಿ ಕಾಶ್ಮೀರ ವಿಜಯ ತಾಳಮದ್ದಳೆಯ ಪ್ರಸ್ತುತಪಡಿಸಲಾಯಿತು. ಹಿಮ್ಮೇಳದಲ್ಲಿ ಪಟ್ಲ ಸತೀಶ ಶೆಟ್ಟಿ ಮತ್ತು ರವಿಚಂದ್ರ ಕನ್ನಡಿಕಟ್ಟೆ, ಡಾ.ಪ್ರಖ್ಯಾತ್ ಶೆಟ್ಟಿ, ರೋಹಿತ್ ಉಚ್ಚಿಲ ಹಾಗೂ ಮಯೂರ ನಾಯ್ಕ, ಅರ್ಥಧಾರಿಗಳಾಗಿ ಪ್ರೊ.ಎಂ.ಎಲ್.ಸಾಮಗ, ತಲಪಾಡಿ ಸದಾಶಿವ ಆಳ್ವ, ಪ್ರೊ.ಪವನ್ ಕಿರಣಕೆರೆ, ಹರೀಶ್ ಬೊಳಂತಿಮೊಗರು, ಶ್ರೀರಮಣ ಆಚಾರ್ಯ ಹಾಗೂ ಮಹೇಂದ್ರ ಆಚಾರ್ಯ ಭಾಗವಹಿಸಿದರು.
ಶಕುಂತಳಾಗೆ ‘ಮಹಿಳಾ ರಾಷ್ಟ್ರಕಲಾ ಪುರಸ್ಕಾರ‘ ಪ್ರದಾನ
‘ನನ್ನ ಮಕ್ಕಳಿಗೆ ಸೇನೆಗೆ ಸೇರುವ ತವಕವಿತ್ತು. ಅವರ ಆಸಕ್ತಿಯನ್ನು ನಾನು ಪ್ರೋತ್ಸಾಹಿಸಿದೆ. ಇದಕ್ಕಾಗಿ ಶ್ರಮಪಟ್ಟಿದ್ದೇಲ್ಲಾ ಅವರೇ’ ಎಂದು ಶಕುಂತಳಾ ಭಂಡಾರ್ಕರ್ ಹೇಳಿದರು. ಕಾರ್ಗಿಲ್ ಯುದ್ಧದಲ್ಲಿ ಪತಿ ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರ್ಕರ್ ಅವರನ್ನು ಕಳೆದುಕೊಂಡ ಬಳಿಕವೂ ತಮ್ಮ ಇಬ್ಬರು ಮಕ್ಕಳನ್ನೂ ಸೇನೆಗೆ ಸೇರಿಸಿದ ಅವರಿಗೆ ‘ಮಹಿಳಾ ರಾಷ್ಟ್ರಕಲಾ ಪುರಸ್ಕಾರ‘ ಪ್ರದಾನ ಮಾಡಲಾಯಿತು. ‘ಸೇನೆಯಲ್ಲಿ ಪತಿ ಸಲ್ಲಿಸಿದ ಸೇವೆ ನನ್ನಲ್ಲಿ ಪ್ರೇರಣೆ ಹಾಗೂ ಮಕ್ಕಳ ಆಸಕ್ತಿಯನ್ನು ಪ್ರೋತ್ಸಾಹಿಸಲು ಹುಮ್ಮಸ್ಸು ನೀಡಿತ್ತು. ಹಿರಿಯ ಮಗ ನಿರ್ಭಯ್ ; ಕಠಿಣ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಸೇನೆಗೆ ಆಯ್ಕೆಯಾದಾಗ ಹೆಮ್ಮೆಯಾಯಿತು. ಆತ ಈಗ ಭೂಸೇನೆಯಲ್ಲಿ ಉತ್ತಮ ಹುದ್ದೆಯಲ್ಲಿದ್ದಾನೆ. ನಾವೀಕನಾಗುವ ಆಸಕ್ತಿ ಹೊಂದಿದ್ದ ಕಿರಿಯ ಮಗ ಅಕ್ಷಯ್ ನೌಕಾ ಪಡೆಗೆ ; ಸೇರಿದ್ದಾನೆ’ ಎಂದರು. ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ವಿನ್ಸೆಂಟ್ ಡಿಸೋಜ, ಪತ್ರಕರ್ತ ಮನೋಹರ ಪ್ರಸಾದ್ ಮತ್ತು ಸಂಸ್ಕಾರ ಭಾರತಿ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಚಂದ್ರಶೇಖರ್ ಕೆ. ಶೆಟ್ಟಿ ಅವರಿಗೆ ‘ತುಳುನಾಡ ಸುಶಾಸನ ಅಮೃತ ಭಾರತಿ’ ಪುರಸ್ಕಾರ ಪ್ರದಾನ ಮಾಡಲಾಯಿತು.