ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜು ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣಮಯ 2022 ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಸನಾತನ ನಾಟ್ಯಾಲಯ ಮಂಗಳೂರಿನ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿಯವರು ನೆರವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಚಂದ್ರಶೇಖರ್ ಶೆಟ್ಟಿಯವರು ಶ್ರೀಕೃಷ್ಣನ ಮಹಿಮೆಯ ಕುರಿತಂತೆ ತಿಳಿಸಿದರು. ನಾವು ನಮ್ಮ ಜೀವನದಲ್ಲಿ ಅನೇಕ ಸಂಸ್ಕಾರಯುತ ಅಭ್ಯಾಸವನ್ನು ಮಾಡಬೇಕಾಗಿದೆ ನಾವು ಸಣ್ಣ ಸಣ್ಣ ವಿಷಯಗಳಾದ ನಮ್ಮ ತಂದೆ ತಾಯಿಗೆ ಗೌರವವನ್ನು ಕೊಡುವುದು ಅನ್ನವನ್ನು ತಟ್ಟೆಯಲ್ಲಿ ಉಳಿಸದೆ ಪೂರ್ಣ ಊಟ ಮಾಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ವಿದ್ಯಾರ್ಥಿ ಜೀವನದಲ್ಲಿಯೇ ಸಂಸ್ಕಾರವನ್ನು ಪಡೆಯಬೇಕು. ಇಂತಹ ಸಂಸ್ಕಾರವು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ ಮಾತನಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಮಕ್ಕಳಿಗೆ ಶ್ರೀ ಕೃಷ್ಣನ ವೇಷವನ್ನು ಹಾಕಿ ಸ್ಪರ್ಧೆಗೆ ಬಂದಿರುವ ಮುದ್ದುಮಕ್ಕಳು ಅಭಿನಂದನೀಯರು. ಇವರನ್ನು ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಸಿದಾಗ ಇವರು ದೇಶಕ್ಕೆ ಉತ್ತಮ ಪ್ರಜೆಯಾಗುತ್ತಾರೆ. ಇವರು ಸಹ ಎಲ್ಲರಿಗೂ ಸಮಾನವಾದ ಗೌರವವನ್ನು ನೀಡುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್ ಇವರು ವಹಿಸಿ ಮಾತನಾಡಿ ನಾವು ಸ್ಪರ್ಧೆಯಲ್ಲಿ ಭಾಗವಹಿಸುವುದು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚುಗೊಳಿಸುತ್ತದೆ. ಈ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸಲು ಪ್ರೋತ್ಸಾಹಿಸುವ ಶಿಕ್ಷಕರು, ಸಂಸ್ಥೆ ಹಾಗೂ ಪೋಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ಪೆಟ್ರಿಷಿಯಾ ಪಿಂಟೊ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶರಣಪ್ಪ ಹಾಗೂ ವಂದನಾರ್ಪಣೆಯನ್ನು ಭವ್ಯಶ್ರೀ ಇವರು ಸಲ್ಲಿಸಿದರು. ಪೂರ್ಣೇಶ್ ಚಿತ್ರಕಲಾ ಅಧ್ಯಾಪಕರು ಕಾರ್ಯಕ್ರಮದ ಸಂಯೋಜಕರಾಗಿದ್ದರು.